Wednesday, 10 September 2014

ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ


ವೇದಗಳಲ್ಲಿ ಜಾತಿ ಪದ್ಧತಿ ಎನ್ನುವುದು ಇಲ್ಲ. ಅರ್‍ಯ ಜನಾಂಗವು ಪರದೇಶದಿಂದ ಭಾರತದ ಮೇಲೆ ದಂಡೆತ್ತಿ ಬಂದು ಇಲ್ಲಿಯ ಜನರನ್ನು ಸೋಲಿಸಿ ಅವರನ್ನು ಆಳುಗಳನ್ನಾಗಿ ಮಾಡಿಕೊಂಡರೆಂಬುದು ಇದುವರೆಗೂ ನಾವು ನಂಬಿದಂತಹ ಅತಿ ದೊಡ್ಡ ಸುಳ್ಳು . ಇದು ವಿದೇಶಿಯರು ಚಿತ್ರಿಸಿದಂತಹ ಸುಳ್ಳು. ನಮ್ಮ ಜನರನ್ನು ಈ ಸುಳ್ಳಿನಿಂದ ನಂಬಿಸಿ, ನಮ್ಮನ್ನು ಬೇರೆ ಬೇರೆ ಮಾಡಿ ತಾವು ಲಾಭವನ್ನು ಪಡೆದುಕೊಂಡರು. ಅವರು ಆಗ ತಮ್ಮ ಸ್ವಾರ್ಥಕ್ಕಾಗಿ ಮಾಡಿದಂತಹ ಸುಳ್ಳನ್ನು ನಂಬಿ, ಈಗಲು ಜನರು ಅಶಾಂತಿ ಇಂದ ಬಾಳುತ್ತಿದ್ದಾರೆ.
ಸತ್ಯಾಂಶದಲ್ಲಿ ವೇದವು ಬಸವಣ್ಣನವರು ಹೇಳಿದಂತೆ “ಕಾಯಕವೇ ಕೈಲಾಸ” ಎಂಬುದನ್ನು ಸಾರುತ್ತದೆ. ಯಾವುದೇ ಕೆಲಸವಾನ್ನು ಗೌರವದಿಂದ ಹಾಗು ಪೂಜ್ಯತೆ ಇಂದ ಮಾಡಬೇಕು ಎಂದು ವೇದ ಮಂತ್ರಗಳು ಸಾರುತ್ತದೆ. ಹಲವಾರು ಕಡೆ ದಾಸ / ದಸ್ಯು ಅಥವ ರಕ್ಷಸ್ ಎಂಬ ಪದವನ್ನು ಆರ್‍ಯನ್ನರ ಗುಲಾಮರು ಎಂದು ತಪ್ಪಾಗಿ ಅರ್ಥೈಸಲಾಗುತ್ತಿದೆ. ವಿದೇಶಿಯರ ಈ ತಪ್ಪು ಗೊತ್ತಿಲ್ಲದೆ ಮಾಡಿದಂತಹ ತಪ್ಪಲ್ಲ ಬದಲಾಗಿ ಬೇಕೆಂದಲೇ ಚಿತ್ರಿಸಿದಂತಹ ತಪ್ಪು. ನಾವು ಏಕೆ ಈ ವಿದೇಶಿಯರ ಮೇಲೆ ಹೆಚ್ಚು ಕೋಪತೋರಿಸಿದ್ದೇವೆ ಎಂದರೆ ಇವರ ಸ್ವಂತ ಲಾಭಕ್ಕಾಗಿ ನೊರಾರು ವರ್ಷಗಳಿಂದ ಜನರನ್ನು ಮೋಸಮಾಡಿ ವೇದಗಳನ್ನೇ ತಿರುಚುವ ಪ್ರಯತ್ನ ಮಾಡಿದ್ದಾರೆ.
ವೇದಗಳಲ್ಲಿ ಶೂದ್ರರೂ ಸೇರಿದಂತೆ ಎಲ್ಲಾ ಚತುರ್ವರ್ಣರನ್ನು ಗೌರವದಿಂದ ಆರ್‍ಯ ಎಂದು ಸಂಭೋದಿಸುವುದನ್ನು ನಾವು ಕಾಣುತ್ತೇವೆ. ವೇದಗಳೇ ನಮ್ಮ ಸಂಸ್ಕೃತಿಯ ಅಡಿಪಾಯವಾಗಿದ್ದಂತಹ ದೇಶದಲ್ಲಿ, ಸನಾತನ ಪಾಠವಾದ ವೇದಗಳನ್ನೇ ಮರೆತು, ಜಾತಿಯು ಹುಟ್ಟಿನಿಂದ ಬರುವಂತಹದ್ದೆಂದು ನಂಬಿದ್ದೇವೆ. ಜಾತಿಯ ಆಧಾರದ ಮೇಲೆ ಜನರನ್ನು ವಿಂಗಡಿಸುವಂತಹ ನೀಚ ಕೃತ್ಯವನ್ನು ಮಾಡುತ್ತಿದ್ದೇವೆ ಹಾಗು ಕೆಲವು ನಿರ್ದಿಷ್ಟ ಜಾತಿಗಳಲ್ಲಿ ಹುಟ್ಟಿದ ಜನರನ್ನು ಶೂದ್ರರೆಂದು ಕರೆಯುತ್ತಿದ್ದೇವೆ.
ಕೆಲವು ಕಮ್ಯುನಿಸ್ಟರು ಮತ್ತು ಪಕ್ಷಪಾತಿ ಪುರಾತನ ಶಾಸ್ತ್ರಜ್ಞರು ಈಗಾಗಲೇ ನಮ್ಮ ಸಮಾಜಕ್ಕೆ ದೊಡ್ಡ ಹಾನಿಯನ್ನುಂಟು ಮಾಡಿ ಸಮಾಜದಲ್ಲಿ ಬಿನ್ನಾಭಿಪ್ರಾಯ ಎಂಬ ವಿಷ ಬೀಜವನ್ನು ನಮ್ಮೆಲ್ಲರ ಮನಸ್ಸಿನಲ್ಲಿ ಬಾರಿ ಆಳವಾಗಿ ನೆಟ್ಟಿದ್ದಾರೆ. ಇದರಿಂದಾಗಿ ಪಾಪ ಈಗಿನ ದಲಿತರು ತಮ್ಮನ್ನು ತಾವೆ ಹೊರಜಾತಿಯವರು ಎಂದು ತಿಳಿದು ದೊರ ಉಳಿದಿದ್ದಾರೆ. ಈ ಅಂತರದಿಂದ ಎಲ್ಲರು ಒಂದಾಗಲು ಹೇಗೆ ತಾನೆ ಸಾಧ್ಯ? ಈ ಎಲ್ಲಾ ಸಮಸ್ಯೆಗಳಿಗೆ ವೇದಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವುದೇ ಔಷದ.
ಜಾತಿ ಪದ್ದತಿ ಎನ್ನುವುದು ವೇದಗಳಲ್ಲಿ ಇದೆಯೋ ಇಲ್ಲವೋ ಎಂದು ತಿಳಿಯುವುದೇ ಈ ಲೇಖನದ ಮುಖ್ಯ ಉದ್ದೇಶ.
೧) ನಮ್ಮ ಮೊದಲನೆಯ ಲೇಖನದಲ್ಲಿ ಚರ್ಚಿಸಿದಂತೆ ವೇದಗಳಲ್ಲಿ ಯಾವ ವರ್ಣದವರನ್ನು ಮೇಲು ಕೀಳು ಎಂದು ಭಾವಿಸಿಲ್ಲ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಹಾಗು ಶೂದ್ರರ ನಡುವೆ ದ್ವೇಶ ಭಾವನೆ ಹುಟ್ಟುವಂತಹ ಯಾವ ವಸ್ತುವು ಇಲ್ಲ.
೨)ಜಾತಿ ಎಂಬುದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಹೊಸ ಪರಿಕಲ್ಪನೆ. ಇತ್ತೀಚಿನ ದಿನಗಳಲ್ಲಿ ಜಾತಿ/ ಕಾಸ್ಟ್ ಎಂಬುದು ಬಹಳ ಭಿನ್ನವಾಗಿ ಅರ್ಥೈಸಲಾಗುತ್ತಿದೆ. ವರ್ಣ ಹಾಗು ಜಾತಿ ಎಂಬ ಪದವನ್ನು ಬಹಳಾ ತಪ್ಪಾಗಿ ಅರ್ಥೈಸಿಕೊಂಡು ಬಳಸುತ್ತಿದ್ದಾರೆ, ಆದರೆ ವೇದದ ಪ್ರಕಾರ ವರ್ಣ ಹಾಗು ಜಾತಿ ಎಂಬ ಪದಗಳಿಗೆ ಬೇರೆಯೇ ಅರ್ಥವಿದೆ. ಜಾತಿ ಎಂಬುದನ್ನು ಸೂಚಿಸಲು ವರ್ಣ ಎಂಬ ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತಿದೆ ಆದರೆ ನಿಜ ಸಂಗತಿ ಎಂದರೆ ಈ ಪದಗಳೆಲ್ಲವೂ ಬೇರೆ ಬೇರೆ ಅರ್ಥ ಹೊಂದಿರುವಂತ್ತದ್ದು.
೩)ಇತ್ತೀಚಿನ ದಿನದ ಜಾತಿ/ ಕಾಸ್ಟ್ ಎಂಬ ಪದದ ಅರ್ಥವನ್ನು ಸಂಪೂರ್ಣವಾಗಿ ಹಾಳುಮಾಡಲು ಪಾಶ್ಚಾತ್ಯರ ಬಳುವಳಿ ಹೆಚ್ಚು. ತಮಗೆ ಬೇಕಾದಂತೆ ಕಾಸ್ಟ್ ಎಂಬ ಪದವನ್ನು ಅರ್ಥೈಸಿ ಜನರನ್ನು ಬೇರೆ ಬೇರೆಯಾಗಿ ವಿಂಗಡಿಸಿ ತಮ್ಮ ಸ್ವಾರ್ಥವನ್ನು ಸಾಧಿಸಿದ್ದಾರೆ. ಜಾತಿ ಎಂಬುದು ಪೂರ್ಣವಾಗಿ ಯುರೋಪಿಯನ್ನರ ಅನ್ವೇಷಣೆಯಾಗಿದ್ದು ವೇದಗಳಲ್ಲಿ ಅದಕ್ಕೆ ಹೋಲಿಕೆಯಾಗುವ ಪದವೇ ಕಂಡುಬರುವುದಿಲ್ಲ.
ಜಾತಿ:
ನ್ಯಾಯ ಸೂತ್ರವು “ಸಮಾನ ಪ್ರಸವಾತ್ಮಿಕ ಜಾತಿಃ” ಎಂದು ಸೂಚಿಸಿದೆ. ಇದರರ್ಥ ಒಂದೇ ಮೂಲದ ಹುಟ್ಟಿಗೆ ಜಾತಿ ಎನ್ನುತ್ತಾರೆ, ಆದರೆ ನಾವು ಒಂದೇ ರಕ್ತದ ಮೂಲಕ್ಕೆ ಜಾತಿ ಎಂದು ತಪ್ಪು ತಿಳಿದಿದ್ದೇವೆ. ಒಂದೇ ಜೀವಿಯ ಮೂಲಕ್ಕೆ ಜಾತಿ ಎನ್ನುತ್ತೇವೆ.
ಋಷಿಗಳು ಈ ಭೂಮಿಯ ಮೇಲಿರುವ ಹುಟ್ಟನ್ನು ೪ ವಿಧಗಳಾಗಿ ವಿಂಗಡಿಸಿದ್ದಾರೆ.
(೧) ಉದ್ಭಜ – ಭೂಮಿಯಿಂದ ಹುಟ್ಟುವಂತಹ ಜೀವ ( ಸಸ್ಯಗಳು, ಮರಗಳು, ಗಿಡಗಳು, …)
(೨) ಅಂಡಜ – ಮೊಟ್ಟೆಗಳಿಂದ ಹುಟ್ಟುವಂತಹ ಜೀವಿಗಳು ( ಪಕ್ಷಿ ಹಾಗು ಸರಿಸೃಪ)
(೩) ಪಿಂಡಜ – ಗರ್ಭದಿಂದ ಹುಟ್ಟುವಂತಹ ಜೀವಿಗಳು (ಸಸ್ತನಿ)
(೪) ಉಷ್ಮಜ – ವಾತವರಣಕ್ಕೆ ಅನುಗುಣವಾಗಿ ಹುಟ್ಟುವಂತಹ ಜೀವಿಗಳು (ಸೂಕ್ಷ್ಮಾಣುಗಳು)
ಜಾತಿ ಎಂಬುದು ಪರಮಾತ್ಮನ ಒಂದು ಸೃಷ್ಟಿ. ಪ್ರತಿಯೊಂದು ಪ್ರಾಣಿಯೂ ಬೇರೆ ಬೇರೆ ಜಾತಿಗೆ ಸೇರಿರುವಂತದ್ದು. ಹೀಗೆ ಇಡಿ ಮಾನವ ಕುಲವೇ ಒಂದು ಜಾತಿ ಆಗಿರುತ್ತದೆ. ಪ್ರತಿಯೊಂದು ಜಾತಿಯು ತನ್ನದೇ ಆದ ದೈಹಿಕ ಮತ್ತು ಭೌತಿಕ ಗುಣಗಳಿಂದ ಕೊಡಿರುತ್ತದೆ. ಒಂದು ಜಾತಿಯ ಜೀವಿಯು ಇನ್ನೊಂದು ಜಾತಿಯ ಜೀವಿಯೊಂದಿಗೆ ಕೂಡಲು ಸಾಧ್ಯವೇ ಇಲ್ಲ.
ಆದ್ದರಿಂದ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಹಾಗು ಶೂದ್ರ ಒಂದೇ ಜಾತಿಗೆ ಸೇರಿದ್ದು, ಇವರನ್ನು ಬೇರೆ ಬೇರೆ ಜಾತಿ ಎಂದು ಕರೆಯಲಾಗುವುದಿಲ್ಲ ಏಕೆಂದರೆ ಇವರಿಬ್ಬರ ದೈಹಿಕ ಗುಣಗಳು ಒಂದೇ ಆಗಿದೆ. ಬ್ರಾಹ್ಮಣ ಮತ್ತು ಶೂದ್ರರು ಒಂದೇ ಮೂಲ / ಜಾತಿ ಯಲ್ಲಿ ಹುಟ್ಟಿದವರು.
ಆದರೆ ಈಗ ಜಾತಿ ಎಂಬ ಪದಕ್ಕೆ ಬೇರೆಯೇ ಅರ್ಥವಿದೆ. ಮನುಷ್ಯನನ್ನು ವಿಂಗಡಿಸುವ ಸಲುವಾಗಿ ಜಾತಿ ಎಂಬ ಪದದ ಅರ್ಥವನ್ನು ಮನಸೊ ಇಚ್ಚೆ ಉಪಯೋಗಿಸಿದ್ದಾರೆ. ಹೀಗಾಗಿ ಪ್ರತಿಯೊಂದು ಗುಂಪಿನ ಜನರು ತಾವು ಇಂತಹದ್ದೆ ಜಾತಿ ಎಂದು ರೂಢಿಸಿಕೊಂಡು ಬಂದಿದ್ದಾರೆ, ಆದರೆ ನಿಜ ಸ್ವರೂಪದಲ್ಲಿ ಎಲ್ಲಾ ಮಾನವರು ಒಂದೇ ಜಾತಿ.
ವರ್ಣ:
ಜಾತಿಗೂ, ವರ್ಣಕ್ಕೂ ಬಹಳ ವ್ಯತ್ಯಾಸವಿದೆ. ವೇದದ ಪ್ರಕಾರ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಹಾಗು ಶೂದ್ರರ ಜೊತೆಗೆ ಆರ್‍ಯ ಮತ್ತು ದಸ್ಯು ಎಂಬ ವರ್ಣಗಳೂ ಸೇರಿವೆ. ಇದನ್ನು ಅರ್ಥಮಾಡಿಕೊಳ್ಳದವರು ವರ್ಣವೇ ಜಾತಿ ಹಾಗು ಜಾತಿಯು ತಂದೆಯಿಂದ ಮಕ್ಕಳಿಗೆ ಬರುವಂತದ್ದು ಎಂದು ತಪ್ಪು ತಿಳಿದಿದ್ದಾರೆ.
ವರ್ಣ ಎಂದರೆ ಹುಟ್ಟಿನಿಂದ ಬರುವಂತದಲ್ಲ ಬದಲಾಗಿ, ಇಷ್ಟ ಪಟ್ಟು ಸ್ವೀಕರಿಸಿದಂತದ್ದು ಅಥವ ತನ್ನ ಸ್ವಂತ ಇಚ್ಚೆ ಇಂದ ತೆಗೆದುಕೊಂಡಂತಹ ನಿರ್ಣಯ. ಜಾತಿಯು ಪರಮಾತ್ಮನ ಸೃಷ್ಟಿಯಾದರೆ ವರ್ಣವು ನಮ್ಮ ಇಚ್ಚೆ. ಇಂದು ನಾನು ಕ್ಷತ್ರಿಯನಾಗಿದ್ದರೆ, ಮುಂದಿನ ದಿನಗಳಲ್ಲಿ ಬ್ರಾಹ್ಮಣನೂ, ಶೂದ್ರನೂ ಆಗಬಹುದು. ಇದರಿಂದಾಗಿ ವೇದ ಧರ್ಮವು ವರ್ಣಾಶ್ರಮ ಧರ್ಮ ಅಂತಲೂ ಕರೆಸಿಕೊಂಡಿದೆ.
ಆಧ್ಯಾತ್ಮಕತೆ ಹಾಗು ಜ್ಞಾನಕ್ಕೆ ಸಂಬಂಧ ಪಟ್ಟಂತಹ ಕಾರ್ಯಗಳಿಗೆ ತೊಡಗಿಸಿಕೊಂಡವರನ್ನು ಬ್ರಾಹ್ಮಣನೆಂದು,
ರಕ್ಷಣೆ ಹಾಗು ಯುಧ್ಧ ಕಾರ್ಯಗಳಿಗೆ ತೊಡಗಿಸಿಕೊಂಡವರನ್ನು ಕ್ಷತ್ರಿಯನೆಂದು
ವ್ಯಾಪಾರ ಹಾಗು ಪ್ರಾಣಿ ಸಾಕಾಣಿಕೆಗಳಲ್ಲಿ ತೊಡಗಿಸಿಕೊಂಡವರನ್ನು ವೈಶ್ಯರೆಂದು ಹಾಗು
ಇತರೆ ಸಹಾಯ ಕೆಲಸಗಳಾನ್ನು ಮಾಡುವವನನ್ನು ಶೂದ್ರನೆಂದು ಹೇಳುತ್ತದೆ.
ವರ್ಣವು ಇಷ್ಟಪಟ್ಟು ಮಾಡುವಂತಹ ಕೆಲಸಗಳಿಗೆ ಸಂಭಂಧಪಟ್ಟಿರುತ್ತದೆಯೆ ಹೊರೆತು ಹುಟ್ಟಿನಿಂದ ಬರುವಂತಹದಲ್ಲ.
ಬ್ರಾಹ್ಮಣರು ದೇವರ ಬಾಯಿಂದ, ಕ್ಷತ್ರಿಯರು ಕೈಗಳಿಂದ, ವೈಶ್ಯರು ತೊಡೆಗಳಿಂದ ಹಾಗು ಶೂದ್ರರು ಕಾಲುಗಳಿಂದ ಉಗಮಿಸಿದ್ದಾರೆ ಎಂದು ಧೃಢಪಡಿಸಲು ಕೆಲವು ಪುರುಷಸೂಕ್ತಿಯ ಮಂತ್ರಗಳನ್ನು ಉಲ್ಲೀಖಿಸುತ್ತಾರೆ. ಈ ಮಂತ್ರವನ್ನು ಉಲ್ಲೇಖಿಸಿ ವೇದದಲ್ಲಿ ವರ್ಣವು ಹುಟ್ಟಿನಿಂದ ಬರುವಂತದ್ದು ಎಂದು ಸಾಧಿಸುತ್ತಾರೆ, ಆದರೆ ಈ ಮಂತ್ರದ ನಿಜ ಅರ್ಥವೇ ಬೇರೆ.
ಯಜುರ್ವೇದ ೪೦.೮
ಈ ಮಂತ್ರದ ಪ್ರಕಾರ ಪರಮಾತ್ಮನಿಗೆ ಯಾವುದೇ ಆಕಾರವಿಲ್ಲ. ನಿರಾಕಾರಿಯಾದಂತಹ ದೇವನು ಒಂದು ಬೃಹದಾಕಾರದ ಮನುಷ್ಯನ ರೂಪ ತಳೆದು ವರ್ಣಗಳನ್ನು ಸೃಷ್ಟಿಸಲು ಹೇಗೆ ಸಾಧ್ಯ?
ವೇದವು ಕರ್ಮದ ಸಿಧ್ಧಾಂತವನ್ನು ಬಹಳಾ ಗಾಢವಾಗಿ ಪರಿಗಣಿಸಿ, ಪ್ರತಿಪಾದಿಸುತ್ತದೆ. ವರ್ಣವು ದೇವರ ಅಂಗಾಂಗ ಗಳಿಂದ ಸೃಷ್ಟಿಯಾಗಿದ್ದರೆ, ಅದು ಕರ್ಮ ಸಿಧ್ಧಾಂತವನ್ನು ಅರ್ಥಹೀನವನ್ನಾಗಿ ಮಾಡುತ್ತದೆ ಯಾಕೆಂದರೆ ಕರ್ಮ ಸಿಧ್ಧಾಂತದ ಪ್ರಕಾರ ಶೂದ್ರನಾಗಿ ಹುಟ್ಟಿದಂತವನು ಮುಂದಿನ ಜನ್ಮದಲ್ಲಿ ರಾಜನಮಗನಾಗಿ ಹುಟ್ಟಬಹುದು. ಶೂದ್ರನು ನಿಜವಾಗಿಯೂ ದೇವರ ಕಾಲುಗಳಿಂದ ಹುಟ್ಟಿದ್ದಾದರೆ ಮುಂದಿನ ಜನ್ಮದಲ್ಲಿ ರಾಜನ ಮಗನಾಗಲು ಹೇಗೆ ಸಾಧ್ಯ?
ಅದಲ್ಲದೆ ಒಂದು ಜನ್ಮದಲ್ಲಿ ತಾನು ಮಾಡಿದಂತಹ ಪಾಪ, ಪುಣ್ಯಗಳ ಆಧಾರದ ಮೇಲೆ ಮುಂದಿನ ಜನ್ಮವು ಅವಲಂಬಿಸಿರುತ್ತದೆ ಎಂದು ಕರ್ಮ ಸಿಧ್ಧಾಂತವು ಪ್ರತಿಪಾದಿಸುತ್ತದೆ.
ಆತ್ಮಕ್ಕೆ ಕಾಲದ ಪರಿಮಿತಿ ಇಲ್ಲದಿರುವುದರಿಂದ ಆತ್ಮವು ಯಾವ ವರ್ಣಕ್ಕೂ ಸೇರುವುದಿಲ್ಲ. ಆತ್ಮವು ಮನುಷ್ಯನ ಜನ್ಮ ತಳೆದ ನಂತರ ಮಾತ್ರ ಇಂತಹ ವರ್ಣ ಎಂದು ಹೇಳಲು ಸಾಧ್ಯ. ಹೀಗಿರುವಾಗ ವರ್ಣವು ದೇವರ ಅಂಗಾಂಗಗಳಿಂದ ಹುಟ್ಟಿರುವುದು ಅಸಂಭದ್ಧವಾಗುತ್ತದೆ.
ಯಜುರ್ವೇದದ ೩೧ನೇ ಅಧ್ಯಾಯ, ಹತ್ತನೆ ಮಂತ್ರವು ಬಾಯಿ, ಕೈ, ತೂಡೆ ಹಾಗು ಕಾಲುಗಳು ಯಾರು? ಎಂದು ಪ್ರಶ್ನಿಸುತ್ತದೆ. ಇದಕ್ಕೆ ಮುಂದಿನ ಮಂತ್ರವು ಬ್ರಾಹ್ಮಣ ಬಾಯಿ, ಕ್ಷತ್ರಿಯ ಕೈ, ವೈಶ್ಯ ತೊಡೆ ಹಾಗು ಶೂದ್ರ ಕಾಲು ಎಂದು ಉತ್ತರಿಸುತ್ತದೆ. ಇಲ್ಲಿ ಒಂದು ಮುಖ್ಯವಾದ ವಿಷಯ ಗಮನಕ್ಕೆ ತೆಗೆದುಕೊಳ್ಳಬೇಕು. ಬ್ರಾಹ್ಮಣ ಬಾಯಿ ಎಂದು ಈ ಮಂತ್ರವು ಹೇಳುತ್ತದೆಯೆ ಹೊರೆತು ಬ್ರಾಹ್ಮಣ ಬಾಯಿಂದ ಜನಿಸಿದವನೆಂದು ಹೇಳುವುದಿಲ್ಲ. ಜನರಲ್ ತಿಮ್ಮಯ್ಯ ಯಾರು ಎಂದು ಕೇಳಿದರೆ ನಾವು ಅವರೊಬ್ಬರು ಮಹಾನ್ ಕ್ಷತ್ರಿಯ ಎನ್ನುತ್ತೇವೆ. ಇದರರ್ಥ ಅವರು ಕ್ಷತ್ರಿಯರಾದ್ದರು ಎಂದೇ ಹೊರೆತು ಅವರು ಕ್ಷತ್ರಿಯನಿಗೆ ಹುಟ್ಟಿದವನೆಂದಲ್ಲ.
ವಾಸ್ತವದಲ್ಲಿ ಬ್ರಾಹ್ಮಣರು ಅಥವ ಬುದ್ಧಿಜೀವಿಗಳು ಮೆದಳು ಅಥವ ಬಾಯಿಯ ಕ್ರಿಯೆ ಮಾಡುತ್ತಾರೆ. ಅಂದರೆ ಯಾರು ಸಮಾಜದಲ್ಲಿ ಯೋಚನೆ ಮಾಡಿ ಮಾತನಾಡುತ್ತಾರೋ ಅವರು ಬ್ರಾಹ್ಮಣರಾಗುತ್ತಾರೆ. ಕ್ಷತ್ರಿಯರು ಕೈಗಳು ಮಾಡುವ ಕೆಲಸ ಅಂದರೆ ಸಮಾಜದಲ್ಲಿ ಹಲವಾರು ರೀತಿಯ ಸಹಾಯ ಮಾಡಿ ಶಕ್ತಿ ತುಂಬುತ್ತಾರೆ. ಅಥರ್ವಣ ವೇದದಲ್ಲಿ ವೈಶ್ಯರಿಗೆ ಮಧ್ಯ ಎಂಬ ಪದದ ಬಳಕೆಯಾಗಿದೆ. ಮಧ್ಯ ಎಂದರೆ ಹೊಟ್ಟೆಯ ಭಾಗವು ಸೇರುತ್ತದೆ. ಶೂದ್ರರು ಅಥವ ಶ್ರಮಶಕ್ತಿಗಳು ಕಾಲಿನ ಕೆಲಸ ಅಂದರೆ ಸಮಾಜದ ಅಡಿಪಾಯ ಕಟ್ಟಿ ಕಾರ್ಯನಿರ್ವಹಿಸಿ ಮುನ್ನಡೆಯುವಂತೆ ಮಾಡುತ್ತಾರೆ.
ಇದರ ಮುಂದಿನ ಮಂತ್ರವು ಮನುಷ್ಯನ ಇತರೆ ಭಾಗಗಳಾದ ಮೆದಳು, ಕಣ್ಣು ಮತ್ತು ಇತರೆ ಭಾಗಗಳ ಬಗ್ಗೆ ಹೇಳುತ್ತದೆ. ಪುರುಷಸೂಕ್ತವು ಮಾನವ ಸಮಾಜದ ಉಗಮ ಹಾಗು ಒಂದು ಅರ್ಥಪೂರ್ಣ ಸಮಾಜವು ಒಳಗೊಳ್ಳಬೇಕಾದ ವಸ್ತುಗಳ ಬಗ್ಗೆ ಹೇಳುತ್ತದೆ.
ಇಂತಹ ಸುಂದರವಾದ ಹಾಗು ಸುಲಭವಾದ ಮಂತ್ರಗಳನ್ನು, ತಮ್ಮ ಸ್ವಂತ ಲಾಭಕ್ಕಾಗಿ ಇದಕ್ಕೆ ತದ್ವಿರುದ್ಧವಾಗಿ ಅರ್ಥೈಸಿರುವುದು ಬಹಳ ಶೋಚನೀಯ ಮತ್ತು ಹೀನಾಯವಾದ ಕೆಲಸ. ಮನುಸ್ಮೃತಿ, ರಾಮಾಯಣ, ಮಹಭಾರತ, ಭಗವತ್ ಗೀತ, ಹಾಗು ಬ್ರಾಹ್ಮಣ ಪಠ್ಯಗಳಲ್ಲಿಯೊ ಸಹ ಮನುಷ್ಯನು ದೇವರ ಮಾಂಸಖಂಡಗಳನ್ನು ಹರಿದುಕೊಂಡು ಹುಟ್ಟಿದ ಎಂಬ ಹುಚ್ಚುತನದ ಸಿದ್ಧಾಂತವಿಲ್ಲ.
ಈ ಹುಚ್ಚುತನದ ಸಿದ್ಧಾಂತಗಳಿಂದಾಗಿ ಇಂದಿಗೊ ಬ್ರಾಹ್ಮಣರನ್ನು ಮೇಲು ಜಾತಿ ಎಂದು, ಶೂದ್ರರನ್ನು ಕೀಳು ಜಾತಿ ಎಂದು ಜನರು ನೋಡುತ್ತಿದ್ದಾರೆ. ಆದರೆ ಮೊದಲೇ ಪ್ರಸ್ತಾಪಿಸಿದ ಹಾಗೆ ವೇದದಲ್ಲಿ ಎಲ್ಲಾ ಕೆಲಸಗಳಿಗೂ ಒಂದೇ ರೀತಿಯ ಗೌರವ ಕೊಡುವುದರಿಂದ ಮೇಲು ಕೀಳು ಎಂಬ ಭಾವನೆ ವೇದಗಳಲ್ಲಿ ಇಲ್ಲವೇ ಇಲ್ಲ.
ವೇದ ಧರ್ಮದ ಪ್ರಕಾರ ಪ್ರತಿಯೊಬ್ಬನು ಶೂದ್ರನಾಗಿಯೇ ಹುಟ್ಟುವುದು. ಅನಂತರ ಅವರವರ ಶಿಕ್ಷಣದ ಪ್ರಕಾರ ಬ್ರಾಹ್ಮ್ಣನೋ, ಕ್ಷತ್ರಿಯನೋ ಅಥವ ವೈಶ್ಯನೋ ಎಂದು ನಿರ್ಧರಿಸಲಾಗುತ್ತದೆ. ಶಿಕ್ಷಣದ ಪೊರೈಕೆಯು ಎರಡನೆಯ ಜನ್ಮವೆಂದು ಕರೆಯಲ್ಪಡುತ್ತದೆ. ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರನ್ನು ದ್ವಿಜರೆಂದು ಕರೆಯಲ್ಪಡುತ್ತಾರೆ. ಯಾರು ಶಿಕ್ಷಣ ಪಡೆಯುವುದಿಲ್ಲವೋ ಅವನು ಶೂದ್ರನಾಗಿಯೇ ಮುಂದುವರೆಯುತ್ತಾನೆ ಹಾಗು ಶ್ರಮ ಶಕ್ತಿಯಾಗಿ ಕೆಲಸಮಾಡುತ್ತಾನೆ. ಅವನಿಗೆ ಎರಡನೆಯ ಹುಟ್ಟು ಇರುವುದಿಲ್ಲ ಆದರೆ ಅವನನ್ನು ಎಂದಿಗೂ ಕೇಳು ಭಾವನೆಯಿಂದ ನೋಡುವುದಿಲ್ಲ.
ಬ್ರಾಹ್ಮಣನ ಮಗನು ಶಿಕ್ಷಣದಲ್ಲಿ ಅನುತ್ತೀರ್ಣನಾದರೆ ಅವನು ಶೂದ್ರನಾಗಿಯೇ ಉಳಿಯುತ್ತಾನೆ ಹಾಗು ಶೂದ್ರನ ಮಗನೇನಾದರೊ ಶಿಕ್ಷಣದಲ್ಲಿ ಉತ್ತೀರ್ಣನಾದರೆ ಬ್ರಾಹ್ಮಣನೋ, ವೈಶ್ಯನೋ, ಕ್ಷತ್ರಿಯನೋ ಆಗುತ್ತಾನೆ. ಇಂದಿನ ಶಿಕ್ಷಣದಲ್ಲಿ ಹೇಗೆ ಪದವಿಯನ್ನು ಕೊಡಲಾಗುತ್ತದೊ ಹಾಗೆಯೆ ವೇದ ಪದ್ಧತಿಯಲ್ಲಿ ಯಜ್ಞೋಪವಿತ ಪದವಿ ಕೊಡಲಾಗುತ್ತಿತ್ತು. ಯಜ್ಞ ಪಾವಿತ್ರ್ಯಾತೆಯನ್ನು ವೇದವು ಸೂಚಿಸಿತ್ತು. ಯಾರು ಈ ಪಾವಿತ್ರ್ಯತೆಯನ್ನು ಕಾಪಾಡುತಿರಲಿಲ್ಲವೋ ಅವರಿಗೆ ಶಿಕ್ಷಣವನ್ನು ಕೊಡಲಾಗುತ್ತಿರಲಿಲ್ಲ.
ವೇದಗಳಲ್ಲಿ ಇಂತಹ ವರ್ಣ ಬದಲಾವಣೆಗೆ ಹಲವಾರು ಉದಾಹರಣೆಗಳಿವೆ:
೧) ಆತ್ರೇಯ ಋಷಿಯು ಒಬ್ಬ ದಾಸನ ಮಗ ಅಥವ ಅಪರಾಧಿಯ ಮಗನಾಗಿದ್ದ, ಆದರೆ ಅವನು ಅತ್ಯುತ್ತಮ ಬ್ರಾಹ್ಮಣನಾಗಿ ಬದಲಾವಣೆಗೊಂಡು, ಋಗ್ವೇದ ತಿಳಿಯಲು ತುಂಬಾ ಮುಖ್ಯವಾದಂತಹ ಆತ್ರೇಯ ಬ್ರಾಹ್ಮಣ ಹಾಗು ಆತ್ರೇಯ ಉಪನಿಷದ್ ಗಳನ್ನು ಬರೆದರು.
೨) ಐಲುಶ ಋಷಿಯು ಒಬ್ಬ ಜೊಜುಕೋರ ಹಾಗು ಕೀಳುವ್ಯಕ್ತಿತ್ವ ಹೊಂದಿದ ದಾಸಿ ಪುತ್ರನಾಗಿದ್ದ. ಇವನು ಋಗ್ವೇದಗಳನ್ನು ಸಂಪೊರ್ಣವಾಗಿ ತಿಳಿದು ಹಲವಾರು ಸಂಶೋಧನೆಗಳನ್ನು ಮಾಡಿದ. ಇವನು ಕೇವಲ ಋಷಿಗಳಿಂದ ಆಮಂತ್ರಣಗೊಂಡಿದ್ದಲ್ಲದೆ ಅವನ್ನನ್ನು ಆಚಾರ್ಯನೆಂದು ಪರಿಗಣಿಸಲಾಯಿತು. (ಆತ್ರೇಯ ಬ್ರಾಹ್ಮಣ ೨:೧೯)
೩) ಸತ್ಯಕಾಮ್ ಜಾಬಾಲ್ ಒಬ್ಬ ವೈಶ್ಯಯ ಮಗನಾಗಿದ್ದರೂ ನಂತರ ಬ್ರಾಹ್ಮಣನಾದ.
೪) ಪ್ರಿಷಾದ್ ಎಂಬುವವನು ದಕ್ಷ ಮಹರಾಜನ ಮಗನಾದರೊ ಶೂದ್ರನಾದ. ನಂತರ ಅವನು ಪಶ್ಚಾತ್ತಾಪ ಪಟ್ಟು ತಪಸ್ಸು ಮಾಡಿ ಮೋಕ್ಷವನ್ನು ಪಡೆದ. (ವಿಷ್ಣು ಪುರ್‍ಆಣ ೪.೧.೧೪)
ವೇದಗಳಲ್ಲಿ ಶೂದ್ರರು ತಪಸ್ಸುಮಾಡಬಾರದೆಂದು ನಿರ್ಬಂಧಿಸಿದ್ದರೆ. ಪ್ರಿಷಾದನು ತಪಸ್ಸು ಮಾಡಲು ಹೇಗೆ ಸಾಧ್ಯವಾಗುತಿತ್ತು?
೫) ನಿಧೇಷಿತ ಮಹರಾಜನ ಮಗನಾದ ನಭಾಗನು ವೈಶ್ಯನಾದ ಹಾಗು ನಭಾಗನ ಹಲವು ಮಕ್ಕಳು ಕ್ಷತ್ರಿಯರಾದರು ( ವಿಷ್ಣು ಪುರಾಣ ೪.೧.೧೩)
೬) ನಭಾಗನ ಮಗನಾದ ಧ್ರ್‍ಇಷ್ಟನು ಬ್ರಾಹ್ಮಣನಾದ ಹಾಗು ಇವನ ಮಗನು ಕ್ಷತ್ರಿಯನಾದ (ವಿಷ್ಣು ಪುರಾಣ ೪.೨.೨)
೭) ಭಗವತ್ ಗೀತೆಯ ಪ್ರಕಾರ ಅಗ್ನಿವೇಷನು ರಾಜನ ಮಗನಾಗಿದ್ದರೊ ಬ್ರಾಹ್ಮಣನಾದ.
೮) ವಿಷ್ಣು ಪುರಾಣ ಹಾಗು ಭಗವತ್ ಗೀತೆಯ ಪ್ರಕಾರ ರಾಥೋತಾರ್ ಕ್ಷತ್ರಿಯನ ಮಗನಾಗಿ ಹುಟ್ಟಿದ್ದರೊ ಬ್ರಾಹ್ಮಣನಾದ.
೯) ಹಾರಿತ್ ಎಂಬುವವನು ಸಹ ಕ್ಷತ್ರಿಯನ ಮಗನಾಗಿ ಹುಟ್ಟಿದ್ದರೊ ಬ್ರಾಹ್ಮಣನಾದ. (ವಿಷ್ಣು ಪುರಾಣ ೪.೩.೫)
೧೦) ಶೌನಿಕನು ಕ್ಷತ್ರಿಯನ ಮಗನಾದರೊ ಬ್ರಾಹ್ಮಣನಾದ. (ವಿಷ್ಣು ಪುರಾಣ ೪.೮.೧)
ವಾಯುಪುರಾಣ, ವಿಷ್ಣು ಪುರಾಣ ಮತ್ತು ಹರಿವಂಶ ಪುರಾಣದ ಪ್ರಕಾರ ಶೌನಿಕ್ ಋಷಿಯ ಮಕ್ಕಳು ಎಲ್ಲಾ ನಾಲ್ಕು ವರ್ಣಗಳಿಗೂ ಸೇರಿದವರಾಗಿದ್ದಾರೆ.
ಗ್ರಿತ್ ಸಮಾದ್, ವೀತವ್ಯ ಮತ್ತು ವ್ರಿತ್ ಸಮಾತಿಯಲ್ಲಿಯೊ ಸಹ ಇಂತಹ ಉದಾಹರಣೆಗಳಿವೆ.
೧೧) ಚಂಡಾಳನ ಮಗನಾದ ಮಾತಂಗ ನಂತರ ಬ್ರಾಹ್ಮಣನಾದ.
೧೨) ಪುಲತ್ಸ್ಯ ಋಷಿಯ ಮಗನಾದ ರಾವಣನು ನಂತರ ರಾಕ್ಷಸನಾದ.
೧೩) ರಘು ರಾಜನ ಮಗನಾದ ಪ್ರವ್ರಿದ್ದನು ನಂತರ ರಾಕ್ಷಸನಾದ.
೧೪) ತ್ರಿಶಂಕನು ರಾಜನಾದರೊ ಮುಂದೆ ಚಂಡಾಳನಾದ.
೧೫) ವಿಷ್ವಾಮಿತ್ರ ಕ್ಷತ್ರಿಯನಾಗಿದ್ದರೊ ಬ್ರಾಹ್ಮಣನಾದ. ಇವನ ಮಕ್ಕಳು ಶೂದ್ರರಾದರು.
೧೬) ಹಸ್ತಿನಾಪುರ ಸಾಮ್ರಾಜ್ಯದ ಮಂತ್ರಿಯಾಗಿದ್ದ ವಿದುರನು ದಾಸಿಯ ಮಗನಾಗಿ ಹುಟ್ಟಿ ಬ್ರಾಹ್ಮಣನಾದ.
ವೇದಗಳಲ್ಲಿ ಶೂದ್ರ ಎಂಬ ಪದವು ಸುಮಾರು ೨೦ ಬಾರಿ ಬಂದಿದೆ ಆದರೆ ಎಲ್ಲಿಯೂ ಈ ಪದಕ್ಕೆ ಅಗೌರವ ತೋರಿಸಿಲ್ಲ. ಶೂದ್ರರು ಅಸ್ಪೃಶ್ಯರು, ಕೇವಲ ಹುಟ್ಟನ್ನು ಆಧರಿಸುವವರು, ವೇದಗಳನ್ನು ಕಲಿಯಲು ಅವರಿಗೆ ಅವಕಾಶನೀಡಬಾರದು, ಬೇರೆ ವರ್ಣಗಳಿಗಿಂತ ಕೀಳುಮಟ್ಟದವರು, ಯಜ್ಞಗಳಲ್ಲಿ ಪಾಲ್ಗೊಳ್ಳಲು ಅರ್ಹತೆಯಿಲ್ಲದವರು ಎಂದು ಎಲ್ಲಿಯೊ ಹೇಳಿಲ್ಲ.
ವೇದಗಳಲ್ಲಿ ಶೂದ್ರರೆಂದರೆ ಶ್ರಮ ಜೀವಿಗಳು ಎಂದು ಅರ್ಥವಿದೆ (ತಪಸೇ ಶೂದ್ರಂ – ಯಜುರ್ವೇದ ೩೦.೫). ಈ ಕಾರಣದಿಂದಲೇ ಪುರುಷಸೂಕ್ತವು ಶೂದ್ರರನ್ನು ಇಡೀ ಮಾನವ ಸಮಾಜದ ಆಧಾರ ಸ್ತಂಭಗಳೆಂದು ಕರೆಯಲಾಗಿದೆ.
ವೇದಗಳ ಪ್ರಕಾರ ೪ ವರ್ಣಗಳು ೪ ಆಯ್ಕೆಮಾಡಿಕೊಂಡ ಕೆಲಸಗಳಿಗೆ ಅನ್ವಯಿಸುವುದರಿಂದ, ಪ್ರತಿಯೂಬ್ಬರೂ ಬೇರೆ ಬೇರೆ ಪರಿಸ್ಥಿತಿ ಸಂದರ್ಭಗಳಿಗೆ ತಕ್ಕಂತೆ ವರ್ಣಗಳನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ. ಆದ್ದರಿಂದ ಪ್ರತಿಯೂಬ್ಬರೂ ನಾಲ್ಕು ವರ್ಣಗಳಿಗೆ ಸೇರಿದವರಾಗಿದ್ದಾರೆ, ಆದರೆ ತಾವು ಯಾವ ಕೆಲಸವನ್ನು ಹೆಚ್ಚಾಗಿ ಮಾಡುತ್ತಾರೂ ಅವರು ಆ ವರ್ಣಕ್ಕೆ ಸೇರಿದವರಾಗಿರುತ್ತಾರೆ. ವೇದಗಳು ಹಾಗು ಪುರುಷಸೂಕ್ತದ ಸಾರದ ಪ್ರಕಾರ ಪ್ರತಿಯೂಬ್ಬರೂ ೪ ವರ್ಣಗಳಿಗೆ ಸೇರಲು ಪ್ರಯತ್ನಪಡಬೇಕೆಂದು ಹೇಳುತ್ತದೆ.
ಋಷಿಗಳಾದ ವಶಿಷ್ಠ, ವಿಶ್ವಾಮಿತ್ರ, ಅಂಗಿರ, ಗೌತಮ, ವಾಮದೇವ ಮತ್ತು ಕಣ್ವ ನಾಲ್ಕೂ ವರ್ಣದ ಗುಣಗಳನ್ನು ಪ್ರದರ್ಶಿಸಿದ್ದಾರೆ. ಇವರು ವೇದ ಮಂತ್ರಗಳ ಅರ್ಥವನ್ನು ಸಂಶೋಧನೆ ಮಾಡಿ, ದಾಸ್ಯ ಪದ್ಧತಿಯನ್ನು ನಾಶ ಮಾಡಿ, ದೈಹಿಕ ಕೆಲಸಮಾಡಿ, ಸಮಾಜಕಲ್ಯಾಣಕ್ಕಾಗಿ ಸಂಪತ್ತಿನ ನಿರ್ವಾಹಣೆಯನ್ನು ಮಾಡಿದ್ದಾರೆ. ನಾವು ಸಹ ಇವರನ್ನು ಅನುಸರಿಸಬೇಕು.
ಅಂತಿಮವಾಗಿ ವೇದಗಳು ಎಲ್ಲಾ ಮನುಷ್ಯರು ಒಂದೇ ಜಾತಿ ಎಂದು ಹೇಳಿದೆ, ವ್ರೃತ್ತಿ ಗೌರವವನ್ನು ಎತ್ತಿ ಹಿಡಿದಿದೆ, ಮತ್ತು ಎಲ್ಲಾ ಮಾನವರಿಗೆ ಅವರು ಇಷ್ಟಪಟ್ಟ ವರ್ಣವನ್ನು ಆಯ್ಕೆ ಮಾಡಿಕೊಳ್ಳಲು ಸಮಾನ ಅವಕಾಶ ಕಲ್ಪಿಸಿದೆ.
ಜನ್ಮಾಧಾರಿತ ಭೇದಭಾವಗಳು ವೇದಗಳಲ್ಲಿ ಇಲ್ಲವೇ ಇಲ್ಲ. ಇದನ್ನರಿತ ನಾವು ಈ ಜಾತಿ, ಮತ ಎಂಬ ಹುಚ್ಚು ಅರ್ಥಗಳನ್ನು ದಹಿಸಿ ನಾವೆಲ್ಲಾ ಒಂದಾಗಬೇಕು. ಜನ್ಮಾಧಾರಿತ ಭೇದಭಾವಗಳನ್ನು ತೊರೆದು, ನಾವೆಲ್ಲರೂ ವೇದಗಳ ಆಶ್ರಯದಡಿ ಒಂದಾಗಿ ಒಂದು ಅರ್ಥಪೂರ್ಣ ಸಮಾಜವನ್ನು ಕಟ್ಟಲು ಶ್ರಮಿಸೋಣ.
ಇದೆಲ್ಲವೂ ವೇದಗಳಲ್ಲಿ ಜಾತಿ ಪದ್ಧತಿ ಇಲ್ಲ ಎಂಬುದನ್ನು ನಿಸ್ಸಂಶಯವಾಗಿ ಪ್ರತಿಬಿಂಬಿಸುತ್ತದೆ.

ಕೃಪೆ : ಅಗ್ನಿವೀರ್ 

No comments:

Post a Comment